ಕೆಲೆನ್, ಎಮೆರಿ

ಅಂತರಾಷ್ಟ್ರೀಯ ಖ್ಯಾತಿಯ ರಾಜಕೀಯ ವ್ಯಂಗ್ಯ ಚಿತ್ರಕಾರ ಮತ್ತು ಲೇಖಕ. ಹಂಗರಿಯ ಗ್ಯಾರ್‍ನಲ್ಲಿ 1896ರಲ್ಲಿ ಜನಿಸಿದ. ಬುಡಾಪೆಸ್ಟ್, ಮ್ಯೂನಿಕ್ ಮತ್ತು ಪ್ಯಾರಿಸ್‍ಗಳ ಕಲಾಶಾಲೆಗಳಲ್ಲಿ ಶಿಕ್ಷಣ ಪಡೆದ. ರಾಜಕೀಯ ವ್ಯಂಗ್ಯಚಿತ್ರಕಾರನಾಗಿ ಅವನ ಜೀವನಯಾತ್ರೆ ತೊಡಗಿದ್ದು 1922ರಲ್ಲಿ. ಅದೂ ಒಂದು ಆಕಸ್ಮಿಕ. ಕ್ರೀಡಾ ವ್ಯಂಗ್ಯಚಿತ್ರಕಾರನಾಗಿ ಸ್ವಿಟ್ಸರ್ಲೆಂಡಿನ ಲೊಸ್ಯಾóನ್‍ಗೆ ಹೋಗಿದ್ದಾಗ ಅಲ್ಲಿ ನಡೆಯುತ್ತಿದ್ದ ಸಮೀಪಪ್ರಾಚ್ಯ ಶಾಂತಿ ಸಮ್ಮೇಳನ ಅವನ ಗಮನ ಸೆಳೆಯಿತು. ಅವನು ಪ್ವಾನ್‍ಕ್ಯಾರೇ, ವೆನಿಜೆóಲಸ್, ಮುಸೊಲೀನಿ, ಇಸ್ಮತ್ ಪಾಷಾ, ಲಾರ್ಡ್ ಕರ್ಜóನ್ ಮತ್ತು ಇತರ ವಿಶ್ವನಾಯಕರ ಚಿತ್ರಗಳನ್ನು ಬರೆದ. ಆಮೇಲೆ ಇನ್ನೊಬ್ಬ ಹಂಗೇರಿಯನ್ ಕಲಾವಿದ ಅಲಾಯ್ಸ್ ಡೆರ್ಸೋನ ಒಂದಿಗೆ ಕೂಡಿ ಆ ಸಮ್ಮೇಳನದ ಬಗ್ಗೆ ಸಂಕಲಿಸಿದ ವ್ಯಂಗ್ಯಚಿತ್ರಸಂಪುಟದಲ್ಲಿ ಈ ಚಿತ್ರಗಳನ್ನೂ ಸೇರಿಸಿದ. ಆತ ಪ್ರಕಟಿಸಿದ ಮಿತಪ್ರಸಾರದ ಇಂಥ ಚಿತ್ರಸಂಪುಟಗಳಲ್ಲಿ ಇದೇ ಮೊದಲನೆಯದು. ಎರಡು ಮಹಾಯುದ್ಧಗಳ ನಡುವಣ ಕಾಲದಲ್ಲಿ ಸಮಾವೇಶಗೊಂಡ ಪ್ರತಿಯೊಂದು ಅಂತರರಾಷ್ಟ್ರೀಯ ಸಮ್ಮೇಳನದಲ್ಲೂ ಇವರಿಬ್ಬರೂ ಹಾಜರಿರುತ್ತಿದ್ದರು; ಬಣ್ಣದ ಕಡ್ಡಿ ಹರಿಸಿ ಪ್ರತಿಯೊಂದು ಮುಖ್ಯ ಸಂದರ್ಭವನ್ನೂ ವ್ಯಕ್ತಿಯನ್ನೂ ರೇಖಿಸುತ್ತಿದ್ದರು. ಅವರ ಕೃತಿಗಳು ಈಗ ಸಮಕಾಲೀನ ಇತಿಹಾಸದ ವಿಡಂಬನಾತ್ಮಕ ದಾಖಲೆಗಳಾಗಿವೆ. ಕೆಲೆನ್ನನ ಅನೇಕ ವರ್ಣಚಿತ್ರಗಳು ಪ್ಯಾಲೇ ಡಿ ನೇಷನ್ಸ್, ಜೀನೀವದ ಲೀಗ್ ಆಫ ನೇಷನ್ಸ್ ಮ್ಯೂಸಿಯಂ, ನ್ಯೂಯಾರ್ಕಿನ ದಿ ಯುನೈಟೆಡ್ ನೇಷನ್ಸ್ ಪ್ರೆಸ್ ಕ್ಲಬ್ ಮತ್ತು ವಿಶ್ವಾದ್ಯಂತ ಅನೇಕ ಸರ್ಕಾರಿ ಕಟ್ಟಡಗಳ ಮತ್ತು ಗ್ರಂಥಾಲಯಗಳ ಕಟ್ಟಡಗಳ ಗೋಡೆಗಳನ್ನು ಅಲಂಕರಿಸಿವೆ. ಹಲವಾರು ಎಡೆಗಳಲ್ಲಿ ಅವುಗಳ ಪ್ರದರ್ಶನಗಳನ್ನೂ ಏರ್ಪಡಿಸಲಾಗಿದೆ.

ಭಾರತದ ಬಗ್ಗೆ ಲಂಡನಿನಲ್ಲಿ ನಡೆದ ದುಂಡುಮೇಜಿನ ಪರಿಷತ್ತಿನಲ್ಲಿ (1930-1931) ಕೆಲೆನ್ ಕೂಡ ಹಾಜರಿದ್ದ. ಅದರಲ್ಲಿ ಭಾಗವಹಿಸಿದ್ದ ಗಾಂಧಿ, ಜಿನ್ನಾ ಮತ್ತು ಇತರ ಎಲ್ಲ ಪ್ರಮುಖರ ಚಿತ್ರಗಳನ್ನೂ ಅವರನ್ನು ನೋಡಿ ನೇರವಾಗಿ ರಚಿಸಿದ. ಈ ವ್ಯಂಗ್ಯಚಿತ್ರಗಳ ಒಂದು ಸಂಪುಟ ರಚಿಸಿಕೊಡಬೇಕೆಂದು ಆತ ಕಾಶ್ಮೀರದ ಮಹಾರಾಜನಿಂದ ನಿಯೋಜಿತನಾಗಿದ್ದ. 1938ರಲ್ಲಿ, ಲೀಗ್ ಆಫ್ ನೇಷನ್ಸ್ ಕುಸಿದು ಬಿದ್ದ ಮೇಲೆ, ಕೆಲೆನ್ ಅಮೆರಿಕಕ್ಕೆ ಹೋದ. 1945ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ವಿಶ್ವಸಂಸ್ಥೆಯ ಜನನವನ್ನು ಚಿತ್ರರೂಪದಲ್ಲಿ ರೇಖಿಸಿದ. 1948ರಿಂದ 1957ರ ವರೆಗೆ ಆತ ವಿಶ್ವಸಂಸ್ಥೆಯಲ್ಲಿ ಟೆಲಿವಿಷನ್ ನಿರ್ದೇಶಕನೂ ತಯಾರಕನೂ ಆಗಿ ಕೆಲಸಮಾಡಿದ. ಆ ಕಾಲದಲ್ಲಿ ಆತನ ಕೆಲವು ತಯಾರಿಕೆಗಳು ಆ ವೃತ್ತಿಗೆ ಸಂಬಂಧಿಸಿದ ಅತ್ಯುನ್ನತ ಪ್ರಶಸ್ತಿಗಳನ್ನು ಸಂಪಾದಿಸಿಕೊಟ್ಟುವು. ಎಮ್ಮಿ, ಪೀಬಾಡಿ ಮತ್ತು ಒಹಾಯೊ ರಾಜ್ಯಪ್ರಶಸ್ತಿಗಳು ಅವುಗಳಲ್ಲಿ ಮುಖ್ಯವಾದವು. ವಿಶ್ವಸಂಸ್ಥೆಯಿಂದ ನಿವೃತ್ತಿಹೊಂದಿದ ಮೇಲೆ ಆತ ವಯಸ್ಕರಿಗೂ ಮಕ್ಕಳಿಗೂ ಹಲವು ಪುಸ್ತಕಗಳನ್ನು ಬರೆದ. ಈಗ ಆತನೊಬ್ಬ ಪತ್ರಸಂಘ (ಸಿಂಡಿಕೇಟೆಡ್) ಬರಹಗಾರನೂ ಕಲಾವಿದನೂ ಟೆಲಿವಿಷನ್ ಸಲಹಾಕಾರನೂ ಆಗಿದ್ದಾನೆ. ಅಮೆರಿಕದ ನ್ಯೂಯಾರ್ಕ್ ಟೈಮ್ಸ್, ನ್ಯೂಯಾರ್ಕ್ ಹೆರಾಲ್ಡ್ ಟ್ರಿಬ್ಯೂನ್, ಫಾರ್ಚೂನ್, ಎಸ್ಕ್ವೈರ್, ಕ್ರಿಶ್ಚನ್ ಸೈನ್ಸ್ ಮಾನಿಟರ್, ಮದ್ರಾಸಿನ ದಿ ಹಿಂದೂ ಮುಂತಾದ, ವಿಶ್ವದ ಅನೇಕ ಪ್ರಮುಖ ಪತ್ರಿಕೆಗಳಲ್ಲಿ ಅವನ ಲೇಖನಗಳು ಪ್ರಕಟವಾಗಿವೆ. ಸಮಕಾಲೀನ ರಾಜನೀತಿಜÐರ ಮುಖ ಮತ್ತು ವ್ಯಕ್ತಿತ್ವಗಳನ್ನು ಕುರಿತು ಮೂರು ವರ್ಷಕಾಲ ಆತ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಿದ.
ತನ್ನ ವೃತ್ತಿಜೀವನದ ಪ್ರಾರಂಭದಲ್ಲಿಯೇ ಕೆಲೆನ್‍ಗೆ ಸಂವಿಧಾನ ಮನಶ್ಯಾಸ್ತ್ರದಲ್ಲಿ ಆಸಕ್ತಿ ಉಂಟಾಯಿತು. ರೂಪಕ್ಕೂ ಕಾರ್ಯಭಾರಕ್ಕೂ ಯಾವಾಗಲೂ ಪರಸ್ಪರ ಸಂಬಂಧ ಇದ್ದೇ ಇರುತ್ತದೆಯೆಂಬ ಅಂಶವನ್ನು ಆತ ತನ್ನೆಲ್ಲ ಬರೆವಣಿಗೆಗಳಲ್ಲೂ ಒತ್ತಿ ಹೇಳುತ್ತಾನೆ. ರಾಜನೀತಿಜÐನ ನೀತಿ ಆ ವ್ಯಕ್ತಿಯ ಮುಖದ ಮೇಲೇ ಸುವ್ಯಕ್ತವಾಗಿರುತ್ತದೆ; ಆ ವ್ಯಕ್ತಿಯೇನಾದರೂ ಸುಳ್ಳು ಹೇಳಿದನೋ, ಅವನ ಮುಖ ನಿಜವನ್ನು ನುಡಿಯುತ್ತದೆ; ವ್ಯಕ್ತಿತ್ವಕ್ಕೂ ಮೈಕಟ್ಟಿಗೂ ಅವಿನಾಸಂಬಂಧವುಂಟು-ಎಂಬುದೇ ಕೆಲೆನ್ ಕಲೆಯ ಜೀವಾಳ; ಅದು ಕೇವಲ ವಿಕಟ ವ್ಯಂಗ್ಯ ಚಿತ್ರೀಕರಣವಲ್ಲ. ರೇಖೆಗಳ ಮಿತ ಬಳಕೆಯಲ್ಲಿ ಅವನಿಗೆ ನಂಬಿಕೆ. ವ್ಯಕ್ತಿತ್ವವೊಂದರ ಸಂದೇಶಸೂಚನೆಗೆ ಎಷ್ಟು ರೇಖೆಗಳು ಅಗತ್ಯವೋ ಅಷ್ಟಕ್ಕಿಂತ ಹೆಚ್ಚಾಗಿ ಅವನ್ನು ಆತ ಬಳಸುವುದಿಲ್ಲ. ಅದು ಖಚಿತವೂ ಸ್ಪಷ್ಟವೂ ಆಗುವಂತೆ ಮಾಡಲು ಹಾಸ್ಯ ವ್ಯಂಗ್ಯ ಬೆರೆಸಿ ಸ್ವಲ್ಪ ಉತ್ಪ್ರೇಕ್ಷೆ ಮಾಡುವುದುಂಟು.
ಎರಡು ಮಹಾಯುದ್ಧಗಳನ್ನೂ ಸಾಕಷ್ಟು ಸಂಖ್ಯೆಯಲ್ಲಿ ವಿವಿಧ ವರ್ಣಗಳ ಕ್ರಾಂತಿಗಳನ್ನೂ ಕಂಡಿರುವ ಕೆಲೆನ್ ತನ್ನನ್ನು ಉಗ್ರ ಶಾಂತಿವಾದಿಯೆಂದು ತಾನೇ ಬಣ್ಣಿಸಿಕೊಂಡಿದ್ದಾನೆ.

ಕೆಲೆನ್ ಕೃತಿಗಳಲ್ಲಿ (ಎರಡನೆಯ ಮಹಾಯುದ್ಧಕ್ಕಿಂತ ಮೊದಲು ಎ.ಡೆರ್ಸೋ ಒಂದಿಗೆ ಕೂಡಿ ರಚಿಸಿದವೂ ಸೇರಿದಂತೆ) ಮುಖ್ಯವಾದವು ಇವು: ಲೆ ಗಾರ್ಡಿಯನ್ ಡೆ ಲಾ ಪೇಕ್ಸ್ (ಲೀಗ್ ಆಫ್ ನೇಷನ್ಸ್) (1923), ಲೆ ಟೆಸ್ಟಮೆಂಟ್ ಡೆ ಜಿನೀವ (1931), ದಿ ಲೀಗ್ ಅಟ್ ಲಂಚ್ (1936), ಪ್ಲಾಟಿಪಸ್ ಅಟ್ ಲಾರ್ಜ್ (1960), ಪೀಸ್ ಇನ್ ದೆರ್ ಟೈಮ್ (1963), ಹ್ಯಾಮರ್ ಷೀಲ್ಡ್ (1966), ದಿ ಫೇಸ್ ಆಫ್ ಮ್ಯಾನ್ (1972) ಮತ್ತು ಮಕ್ಕಳಿಗಾಗಿ ಬರೆದ ಹಲವಾರು ಸಚಿತ್ರ ಪುಸ್ತಕಗಳು.     
				  								 (ಜಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ